Udyogatana
ಉದ್ಯೋಗ

ತಹಶೀಲ್ದಾರ್ ಹುದ್ದೆ ಪಡೆಯುವುದು ಹೇಗೆ? | ತಹಸೀಲ್ದಾರ್ ನೇಮಕಾತಿಯ ಸಂಪೂರ್ಣ ಮಾಹಿತಿ ಇಲ್ಲಿದೆ...

ಸವಿತಾ ಎಂ.,18 Oct 2025, 12:36 pm IST

ತಹಸೀಲ್ದಾರ್ ಹುದ್ದೆ ಪಡೆಯಲು ಏನು ಮಾಡಬೇಕು? ವಿದ್ಯಾರ್ಹತೆ, ಕರ್ತವ್ಯಗಳು, ವೇತನ, ಸೌಲಭ್ಯಗಳು ಮತ್ತು ನೇಮಕ ಪ್ರಕ್ರಿಯೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...

ತಹಶೀಲ್ದಾರ್ ಹುದ್ದೆ ಪಡೆಯುವುದು ಹೇಗೆ? | ತಹಸೀಲ್ದಾರ್ ನೇಮಕಾತಿಯ ಸಂಪೂರ್ಣ ಮಾಹಿತಿ ಇಲ್ಲಿದೆ...

How To Become Tahsildar: ಗ್ರಾಮೀಣಾಭಿವೃದ್ಧಿಯಲ್ಲಿ ಅತ್ಯಂತ ಮಹತ್ವದ ಸರ್ಕಾರಿ ಪಾತ್ರವಹಿಸುವ ತಹಸೀಲ್ದಾರ್ ಹುದ್ದೆ ಅತ್ಯಂತ ಗೌರವಯುತ ಹುದ್ದೆ ಕೂಡ ಹೌದು. ತಾಲ್ಲೂಕಿನ ಆಡಳಿತ ಕೇಂದ್ರ ಸ್ಥಾನದಂತಿರುವ ತಹಸೀಲ್ದಾರ್ ಹುದ್ದೆ ಪಡೆಯುವುದು ಒಂದು ಸವಾಲಿನ ಕೆಲಸವೇ ಹೌದಾದರೂ, ತಹಸೀಲ್ದಾರರಾಗುವುದು ಅಸಾಧ್ಯವೇನಲ್ಲ. ಸೂಕ್ತ ವಿದ್ಯಾರ್ಹತೆ, ಸೇವಾ ಮನೋಭಾವವುಳ್ಳ ಅಭ್ಯರ್ಥಿಗಳು ಈ ಹುದ್ದೆಗೇರಬಹುದು.

ತಹಸೀಲ್ದಾರರ ಕರ್ತವ್ಯಗಳೇನು?

ತಹಶೀಲ್ದಾರರು ತಾಲೂಕಿನ ಆಡಳಿತವನ್ನು ನಿರ್ವಹಿಸುವ ಪ್ರಮುಖ ಸರ್ಕಾರಿ ಅಧಿಕಾರಿಯಾಗಿದ್ದು; ಭೂ ಕಂದಾಯ ಸಂಗ್ರಹಣೆ, ಭೂ ದಾಖಲೆಗಳ ನಿರ್ವಹಣೆ, ಭೂ ವಿವಾದಗಳ ಪರಿಹಾರ ಮತ್ತು ಗ್ರಾಮ ಲೆಕ್ಕಿಗರ ದಾಖಲೆಗಳನ್ನು ಪರಿಶೀಲಿಸುವ ಜವಾಬ್ದಾರಿ ಇವರದ್ದಾಗಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964, ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ಮತ್ತು ಇತರ ರಾಜ್ಯ ಕಾಯ್ದೆಗಳ ಅಡಿಯಲ್ಲಿ ತಹಶೀಲ್ದಾರರು ಕಾನೂನಾತ್ಮಕ ಕೆಲಸವನ್ನು ನಿರ್ವಹಿಸುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಒತ್ತುವರಿಗಳ ತೆರವು, ಭೂ ಸುಧಾರಣೆ ಕಾಯ್ದೆಯ ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ಭೂ ಸುಧಾರಣೆ, ಸಾಲಗಳಿಗೆ ಸಂಬಂಧಿಸಿದ ಕೆಲಸಗಳ ಉಸ್ತುವಾರಿ ಇವರದ್ದಾಗಿದೆ.

ಜಾತಿ, ಆದಾಯ ಮತ್ತು ನಾಗರಿಕತ್ವ ಪ್ರಮಾಣಪತ್ರಗಳನ್ನು ನೀಡುವ ಹೊಣೆ ಕೂಡ ಇವರ ಮೇಲಿದೆ. ತಹಶೀಲ್ದಾರರು ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸರಕಾರಕ್ಕೆ ಸಹಾಯ ಮಾಡುತ್ತಾರೆ.

ತಹಸೀಲ್ದಾರರಾಗಲು ಶೈಕ್ಷಣಿಕ ಅರ್ಹತೆ ಏನಿರಬೇಕು?

ತಹಶೀಲ್ದಾರರಾಗಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಯಾವುದೇ ವಿಷಯದಲ್ಲಿ ಪದವಿ ಪಡೆದಿರಬಹುದಾದರೂ ಕಾನೂನು, ವಾಣಿಜ್ಯ ಅಥವಾ ಅರ್ಥಶಾಸ್ತ್ರದಂತಹ ವಿಷಯಗಳು ಈ ಹುದ್ದೆಗೆ ಹೆಚ್ಚು ಸೂಕ್ತವೆಂದು ಪರಿಗಣಿಸಲಾಗುತ್ತದೆ.

ಇದರ ಜೊತೆಗೆ ಅಭ್ಯರ್ಥಿಗಳು ಕನ್ನಡ ಭಾಷೆಯಲ್ಲಿ ಹಿಡಿತ ಹೊಂದಿರಬೇಕು. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳೂ ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಆದರೆ ಪರೀಕ್ಷೆಯ ಸಂದರ್ಭದಲ್ಲಿ ಪದವಿ ಪೂರ್ಣಗೊಳಿಸಿರಬೇಕು.

ನೇಮಕಾತಿ ಪ್ರಕ್ರಿಯೆ ಹೇಗೆ?

ಕರ್ನಾಟಕದಲ್ಲಿ ತಹಶೀಲ್ದಾರರ ನೇಮಕಾತಿಯನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಮಾಡುತ್ತದೆ. ಈ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನಗಳನ್ನು ಒಳಗೊಂಡಿರುತ್ತದೆ.

ಪೂರ್ವಭಾವಿ ಪರೀಕ್ಷೆ, ವಸ್ತುನಿಷ್ಠ ಪ್ರಶ್ನೆಗಳನ್ನು ಒಳಗೊಂಡಿದ್ದು, ಸಾಮಾನ್ಯ ಜ್ಞಾನ, ಅರ್ಹತೆ ಮತ್ತು ತಾರ್ಕಿಕ ಕೌಶಲ್ಯಗಳನ್ನು ಪರೀಕ್ಷಿಸುತ್ತದೆ. ಈ ಹಂತದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹರಾಗುತ್ತಾರೆ. ಇದು ಒಂಭತ್ತು ಪತ್ರಿಕೆಗಳನ್ನು ಒಳಗೊಂಡಿದ್ದು; ಕನ್ನಡ, ಇಂಗ್ಲೀಷ್ ವಿಷಯಾಧರಿತ ಪ್ರಬಂಧ ಮತ್ತು ಐಚ್ಚಿಕ ವಿಷಯಗಳಿರುತ್ತವೆ.

ಅಂತಿಮವಾಗಿ ಸಂದರ್ಶನದಲ್ಲಿ ಅಭ್ಯರ್ಥಿಯ ವ್ಯಕ್ತಿತ್ವ, ನಾಯಕತ್ವ ಗುಣಗಳು ಮತ್ತು ಆಡಳಿತಾತ್ಮಕ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಎಲ್ಲಾ ಹಂತಗಳಲ್ಲಿ ಉತ್ತಮ ಸಾಧನೆ ಮಾಡಿದ ಅಭ್ಯರ್ಥಿಗಳನ್ನು ತಹಶೀಲ್ದಾರರಾಗಿ ನೇಮಿಸಲಾಗುತ್ತದೆ.

ವೇತನ ಶ್ರೇಣಿ ಎಷ್ಟಿರುತ್ತದೆ?

ತಹಶೀಲ್ದಾರರ ವೇತನ ಕರ್ನಾಟಕ ಸರಕಾರದ ವೇತನ ಶ್ರೇಣಿಗೆ ಅನುಗುಣವಾಗಿರುತ್ತದೆ. ಸಾಮಾನ್ಯವಾಗಿ ತಹಶೀಲ್ದಾರರಿಗೆ ರೂ. 52,650 ರಿಂದ ರೂ. 97,100 ರವರೆಗೆ ಮೂಲ ವೇತನ ನೀಡಲಾಗುತ್ತದೆ.

ಇದರ ಜೊತೆಗೆ ಗೃಹ ಭತ್ಯೆ, ವೈದ್ಯಕೀಯ ಭತ್ಯೆ ಮತ್ತು ಇತರ ಸೌಲಭ್ಯಗಳು ಇರುತ್ತವೆ ವೇತನ ಅನುಭವ. ಸೇವಾವಧಿ ಮತ್ತು ಸರಕಾರದ ನೀತಿಗಳಿಗೆ ತಕ್ಕಂತೆ

ಬಡ್ತಿ ಮತ್ತು ಹೆಚ್ಚಿನ ಅವಕಾಶಗಳು

ತಹಶೀಲ್ದಾರ ಹುದ್ದೆಯಲ್ಲಿ ಭಡ್ತಿಗೆ ಅವಕಾಶವಿದೆ. ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ ನಂತರ ಅಭ್ಯರ್ಥಿಗಳು ಸಹಾಯಕ ಆಯುಕ್ತ, ಜಂಟಿ ಆಯುಕ್ತ ಅಥವಾ ಜಿಲ್ಲಾಧಿಕಾರಿಯಂತಹ ಉನ್ನತ ಹುದ್ದೆಗೇರುವ ಅವಕಾಶವಿದೆ. ಬಡ್ಡಿಯು ಸೇವಾವಧಿ, ಕಾರ್ಯಕ್ರಮತೆ ಮತ್ತು ಹಿರಿಯತನದ ಆಧಾರದ ಮೇಲೆ ನಡೆಯುತ್ತದೆ.

ತಹಶೀಲ್ದಾರರು ತಮ್ಮ ಕೌಶಲ್ಯ ಮತ್ತು ಜವಾಬ್ದಾರಿಯನ್ನು ಆಧರಿಸಿ ರಾಜ್ಯ ಆಡಳಿತದಲ್ಲಿ ಉನ್ನತ ಸ್ಥಾನಗಳಿಗೆ ಬರಬಹುದು. ಕೆಲವೊಮ್ಮೆ ಕಂದಾಯ ಇಲಾಖೆಯ ಜೊತೆಗೆ ಇತರ ಇಲಾಖೆಗಳ ಆಡಳಿತಾತ್ಮಕ ಸ್ಥಾನಗಳಿಗೂ ಆಯ್ಕೆಯಾಗಬಹುದು.

ತಹಶೀಲ್ದಾರರಿಗೆ ಸರ್ಕಾರಿ ಸೌಲಭ್ಯಗಳೇನು?

ತಹಶೀಲ್ದಾರರಿಗೆ ಸರಕಾರದಿಂದ ಹಲವಾರು ಸೌಲಭ್ಯಗಳು ದೊರೆಯುತ್ತವೆ. ಇವುಗಳಲ್ಲಿ ವೈದ್ಯಕೀಯ ವಿಮೆ, ಪಿಂಚಣಿ ಯೋಜನೆ, ಗೃಹ ಭತ್ಯೆ, ಪ್ರಯಾಣ ಭತ್ಯೆ ಮತ್ತು ಇತರ ಸರಕಾರಿ ಸೌಲಭ್ಯಗಳು ಸೇರಿವೆ. ಜೊತೆಗೆ ಸರಕಾರಿ ವಸತಿಗೃಹ, ವಾಹನ ಸೌಲಭ್ಯ ಮತ್ತು ಕೆಲವೊಮ್ಮೆ ಭದ್ರತಾ ಸಿಬ್ಬಂದಿಗಳನ್ನು ಒದಗಿಸಲಾಗುತ್ತದೆ. ಈ ಸೌಲಭ್ಯಗಳು ತಹಶೀಲ್ದಾರರ ಕೆಲಸವನ್ನು ಸುಗಮಗೊಳಿಸುವುದರ ಜೊತೆಗೆ ಅದರ ಜೀವನಮಟ್ಟವನ್ನು ಮೇಲ್ದರ್ಜೆಗೇರಿಸುತ್ತವೆ.

ಸವಿತಾ ಎಂ.,

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#ತಹಸೀಲ್ದಾರನೇಮಕಾತಿ#ತಹಶೀಲ್ದಾರಹುದ್ದೆ#ಕೆಪಿಎಸ್ಸಿಪರೀಕ್ಷೆ#ತಹಸೀಲ್ದಾರರಾಗುವುದುಹೇಗೆ ಸರ್ಕಾರಿಸೇವೆ#TahasildarRecruitment#HowToBecomeTahasildar#KPSCExam#GovernmentJobs#TahasildarSalary#KarnatakaJobs
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...