‘ಗಗನ ಸಖಿ’ ಆಗಲು ಪಿಯುಸಿ ಪಾಸಾದರೆ ಸಾಕು | ಸಂಪೂರ್ಣ ಮಾಹಿತಿ ಇಲ್ಲಿದೆ...
‘ಗಗನ ಸಖಿ’ ಆಗುವುದು ಹೇಗೆ? ವಿದ್ಯಾರ್ಹತೆ ಏನು? ಆಯ್ಕೆ ಪ್ರಕ್ರಿಯೆ ಹೇಗೆ? ಅನುಕೂಲ- ಅನಾನುಕೂಲಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ...

Gagana Sakhi Career Guide: ‘ಗಗನ ಸಖಿ’ (Air Hostess) ಅಥವಾ ‘ವಿಮಾನ ಪರಿಚಾರಕರು’ ವಿಮಾನಯಾನ ಉದ್ಯಮದಲ್ಲಿ ಬಹುಮುಖ್ಯ ಪಾತ್ರವನ್ನು ನಿಭಾಯಿಸುತ್ತಾರೆ. ವಿಮಾನಯಾನದ ಸಂದರ್ಭ ಪ್ರಯಾಣಿಕರ ಸುರಕ್ಷತೆ ಮತ್ತು ಅವರಿಗೆ ಬೇಕಾದ ಎಲ್ಲಾ ಅಗತ್ಯ ಸೌಕರ್ಯಗಳನ್ನು ನೀಡುವ ಜವಾಬ್ದಾರಿ ಇವರದ್ದು. ಈ ವೃತ್ತಿಯಲ್ಲಿ ಸೌಂದರ್ಯ, ಸಂವಹನ ಕೌಶಲ್ಯ, ಧೈರ್ಯ ಬಹಳ ಮುಖ್ಯವಾಗಿರುತ್ತದೆ.
ಇದನ್ನೂ ಓದಿ: ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಗ್ರಾಮೀಣ ಡಾಕ್ ಸೇವಕ್ ಎಕ್ಸಿಕ್ಯೂಟಿವ್ ಹುದ್ದೆಗಳು
ಏನು ವಿದ್ಯಾರ್ಹತೆ?
ಕನಿಷ್ಠ ದ್ವಿತೀಯ ಪಿಯುಸಿ ಶಿಕ್ಷಣ ಪೂರೈಸಿರಬೇಕು ಹಾಗೂ ಹದಿನೆಂಟು ವರ್ಷ ತುಂಬಿರಬೇಕು. ಕೆಲವು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಲ್ಲಿ ಕನಿಷ್ಠ ವಯೋಮಿತಿ ಇಪ್ಪತ್ತೊಂದು ವರ್ಷವಿದೆ. ಹಿಂದಿ ಮತ್ತು ಇಂಗ್ಲಿಷ್ ಭಾಷಾ ಜ್ಞಾನ ಕಡ್ಡಾಯವಾಗಿದೆ. ವ್ಯಾಕರಣ ಮತ್ತು ಉಚ್ಚಾರಣೆಯಲ್ಲಿ ಸ್ಪಷ್ಟತೆ ಇರಬೇಕು.
ಕೆಲವು ಸಂದರ್ಭಗಳಲ್ಲಿ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಆರೇಬಿಕ್ ಭಾಷೆ ಬಲ್ಲವರಿಗೆ, ಕೆಲವು ಸ್ಥಳೀಯ ವಿಮಾನಗಳಲ್ಲಿ ಕನ್ನಡ, ತೆಲುಗು ಇತ್ಯಾದಿ ರಾಜ್ಯ ಭಾಷೆಗಳು ಬಲ್ಲವರಿಗೆ ಆದ್ಯತೆ ನೀಡುತ್ತಾರೆ. ಆದರೆ ಇವು ಯಾವುದೂ ಕಡ್ಡಾಯವಾಗಿರುವುದಿಲ್ಲ.
ಗಗನಸಖಿ ಅಥವಾ ವಿಮಾನಯಾನ ಸಂಸ್ಥೆಗಳಲ್ಲಿ ಕೆಲಸ ಮಾಡಲು ಬೇಕಾದ ತರಬೇತಿ ನೀಡುವ ಹಲವು ಸಂಸ್ಥೆಗಳು ಭಾರತದಲ್ಲಿ ಇವೆ. ಆದರೆ ನಿಮಗೆ ಕೌಶಲ್ಯಗಳಿರುವ ಬಗ್ಗೆ ವಿಶ್ವಾಸವಿದ್ದರೆ, ವಿಮಾನಯಾನ ಸಂಸ್ಥೆಗಳು ನೇಮಕಾತಿ ಮಾಡುವ ಸಂದರ್ಭದಲ್ಲಿ ನೇರವಾಗಿ ಆಯ್ಕೆ ಪ್ರಕ್ರಿಯೆಗೆ ಹಾಜರಾಗಬಹುದು.
ಇದನ್ನೂ ಓದಿ: ಪಿಎಫ್ ನಿಯಮ ಸರಳ | ಇನ್ಮುಂದೆ ಗಾರ್ಡಿಯನ್‌ಷಿಪ್ ಸರ್ಟಿಫಿಕೇಟ್ ಬೇಕಿಲ್ಲ
ಆಯ್ಕೆ ಪ್ರಕ್ರಿಯೆ ಹೇಗೆ?
ಮೂರಾಲ್ಕು ಸುತ್ತಿನ ಸಂದರ್ಶನದ ಮೂಲಕ ಗಗನಸಖಿಯರನ್ನು ಆಯ್ಕೆ ಮಾಡಲಾಗುತ್ತದೆ. ಗುಂಪು ಸಂದರ್ಶನದಲ್ಲಿ (Group Discussion) ಒಟ್ಟಾಗಿ ಸಂವಹನ ನಡೆಸಲು ಇರುತ್ತದೆ. ನಂತರ ವೈದ್ಯಕೀಯ ಪರೀಕ್ಷೆ, ಇಲ್ಲಿ ಮುಖ, ಕೈ, ಕಾಲು ಹೀಗೆ ಬಾಹ್ಯವಾಗಿ ಕಾಣುವ ದೇಹದ ಯಾವುದೇ ಭಾಗಗಳಲ್ಲೂ ಗಾಯದ ಗುರುತು ಇರಬಾರದು ಟ್ಯಾಟೂಗಳನ್ನೂ ಹಾಕಿರಬಾರದು.
ಇಲ್ಲಿಂದ ಮುಂದೆ ಎಚ್‌ಆರ್ ಸುತ್ತು; ಇಲ್ಲಿ ಭಾಷಾ ಕೌಶಲ್ಯ, ಸಂವಹನ ಶೈಲಿ ಇತ್ಯಾದಿಯನ್ನು ಪರೀಕ್ಷಿಸಲಾಗುತ್ತದೆ. ಹೀಗೆ ಬೇರೆ ಬೇರೆ ಸುತ್ತುಗಳ ಮೂಲಕ ಆಯ್ಕೆ ಮಾಡಿ, ತರಬೇತಿ ನೀಡಿ, ಇವರನ್ನು ಹುದ್ದೆಗೆ ಬೇಕಾದಂತೆ ಸಜ್ಜುಗೊಳಿಸಬಹುದು ಎಂದೆನಿಸುವವರನ್ನು ಆಯ್ಕೆ ಮಾಡಲಾಗುತ್ತದೆ. ಒಂದು ಸಂಸ್ಥೆಗೆ ಆಯ್ಕೆಯಾದ ಗಗನಸಖಿಯರಿಗೆ ಮೂರು ತಿಂಗಳ ತರಬೇತಿ ನೀಡಲಾಗುತ್ತದೆ.
ಅನುಕೂಲ - ಅನಾನುಕೂಲಗಳೇನು?
ಎಲ್ಲಾ ಉದ್ಯೋಗದಂತೆ ಇಲ್ಲೂ ಅನುಕೂಲ, ಅನಾನುಕೂಲಗಳು ಇವೆ. ದೇಶ-ವಿದೇಶಗಳನ್ನು ಸುತ್ತಾಡುವುದು, ಉಚಿತ ಪ್ರಯಾಣ, ಫೈ ಸ್ಟಾರ್ ಹೋಟೆಲ್‌ಗಳಲ್ಲಿ ಊಟ-ತಿಂಡಿ, ಆರೋಗ್ಯಕರ ಕೆಲಸದ ವೇಳಾಪಟ್ಟಿ, ಉದ್ಯೋಗದ ಭದ್ರತೆ, ವಿಮಾ ಪಾಲಿಸಿ ಹೀಗೆ ಎಲ್ಲವೂ ಸಿಗುತ್ತದೆ. ಇದರ ಜೊತೆಗೆ ಎಸ್‌ಎಲ್‌ಟಿ (Staff Leisure Travel) ಆಯ್ಕೆ, ರಜೆ ಇದ್ದಾಗ ಸಂಬಂಧಿಕರ ಜೊತೆಗೆ ವಿಮಾನದಲ್ಲಿ ಕಡಿಮೆ ದರದಲ್ಲಿ ಪ್ರಯಾಣ ನಡೆಸುವುದು ಹೀಗೆ ಹಲವು ಅನುಕೂಲಗಳು ಗಗನಸಖಿಯರಿಗೆ ಸಿಗಲಿವೆ.
ಇವುಗಳ ಜೊತೆಗೆ ಕೆಲವು ಆನಾನುಕೂಲಗಳೂ ಇವೆ. ಅಂತಾರಾಷ್ಟ್ರೀಯ ಪ್ರಯಾಣದಿಂದ ಸಮಯಗಳ ಬದಲಾವಣೆಯಿಂದ ಸಮಸ್ಯೆಗಳು, ಆಯಾಸ, ಸತತ ಪ್ರಯಾಣದಿಂದ ಆರೋಗ್ಯದಲ್ಲಿ ಏರುಪೇರಾಗುವುದು, ಪ್ರತಿದಿನ ಹೊಸ ಪ್ರಯಾಣಿಕರೊಂದಿಗೆ ವ್ಯವಹರಿಸುವ ಸವಾಲು, ಕೆಲಸ ಸಂಬಂಧಿ ಒತ್ತಡ, ಹಬ್ಬ ಹರಿದಿನಗಳ ಸಂದರ್ಭ, ಸರಕಾರಿ ರಜೆ ಇತ್ಯಾದಿ ದಿನಗಳಲ್ಲಿ ರಜೆ ಸಿಗದಿರುವುದು ಇತ್ಯಾದಿ.
ಇದನ್ನೂ ಓದಿ: SSLC Exam 2026 Registration- 2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ನೋಂದಣಿ ಪ್ರಕ್ರಿಯೆ ಆರಂಭ
ವೃತ್ತಿ ಭವಿಷ್ಯ
ಕನಿಷ್ಠ 18ರ ಹರೆಯದಿಂದಲೇ ಗಗನಸಖಿಯರಾಗಿ ಉದ್ಯೋಗಕ್ಕೆ ಸೇರುವವರು ನಲವತ್ತು - ಐವತ್ತು ವರ್ಷದ ವರೆಗೂ ಈ ಉದ್ಯೋಗದಲ್ಲಿ ಮುಂದುವರೆಯಬಹುದು. ನಲವತ್ತು ವರ್ಷದ ವರೆಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಯುತ್ತದೆ. ನಲವತ್ತು ವಯಸ್ಸಿನ ಬಳಿಕ ಪ್ರತಿ ವರ್ಷ ಈ ಚೆಕ್‌ಅಪ್ ನಡೆಯುತ್ತದೆ.
ಎಲ್ಲಿಯವರೆಗೆ ಆರೋಗ್ಯ ಚೆನ್ನಾಗಿರುತ್ತದೋ, ಅಲ್ಲಿಯವರೆಗೂ ಗಗನಸಖಿಯರಾಗಿ ಮುಂದುವರೆಯಬಹುದು. ಆಗದೇ ಹೋದರೆ ಅದೇ ವಿಮಾನಯಾನ ಸಂಸ್ಥೆಗಳಲ್ಲಿ ಯಾವುದಾದರೂ ಆಫೀಸ್ ಹುದ್ದೆಗಳಿಗೆ ಅಥವಾ ಹೊಸತಾಗಿ ಬರುವ ಗಗನಸಖಿಯರಿಗೆ ತರಬೇತಿ ನೀಡುವ ಕೆಲಸಗಳಿಗೂ ಪ್ರಯತ್ನ ಮಾಡಬಹುದು ಅಥವಾ ತಮ್ಮದೇ ಆದ ತರಬೇತಿ ಸಂಸ್ಥೆಗಳನ್ನೂ ಆರಂಭಿಸಬಹುದು.
ಸವಿತಾ ಎಂ.,
ಸುದ್ದಿ ವರದಿಗಾರ
ನಮ್ಮ ಸಮುದಾಯಕ್ಕೆ ಸೇರಿ
ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ
