ಈ ವರ್ಷದಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾಗಲು ಶೇ.33 ಅಂಕ ಸಾಕು | ಶಿಕ್ಷಣ ಸಚಿವರ ಅಧಿಕೃತ ಘೋಷಣೆ
ಇದೇ ಶೈಕ್ಷಣಿಕ ಸಾಲಿನಿಂದ ಎಸ್ಸೆಎಸ್ಸೆಲ್ಸಿ ಹಾಗೂ ಪಿಯುಸಿ ಬೋರ್ಡ್ ಪರೀಕ್ಷೆಗಳಲ್ಲಿ ಕೇವಲ ಶೇ.33ರಷ್ಟು ಅಂಕ ಪಡೆರೂ ಪಾಸಾಗಬಹುದಾಗಿದೆ. ಈ ಕುರಿತು ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ಕ್ರಮ ಘೋಷಿಸಿದೆ....

SSLC PUC Pass Mark Rule: ಕರ್ನಾಟಕ ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡುವ ಮಹತ್ತರ ಬದಲಾವಣೆಯೊಂದು ಜಾರಿಯಾಗುತ್ತಿದೆ. ರಾಜ್ಯದ ಪರೀಕ್ಷಾ ವ್ಯವಸ್ಥೆಯನ್ನು ಸರಿಹೊಂದಿಸುವ ಉದ್ದೇಶದಿಂದ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತೀರ್ಣ ಅಂಕಗಳ ಪ್ರಮಾಣವನ್ನು ಶೇ.33ಕ್ಕೆ ಇಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಕೋಟಕ್ ಕನ್ಯಾ ಸ್ಕಾಲರ್‌ಶಿಪ್ | ವರ್ಷಕ್ಕೆ 1.5 ಲಕ್ಷ ರೂ ಆರ್ಥಿಕ ನೆರವು
ತೇರ್ಗಡೆಯ ಪ್ರಮಾಣ ಹೆಚ್ಚಳಕ್ಕೆ ಈ ಕ್ರಮ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಅವರು ಅಕ್ಟೋಬರ್ 14ರಂದು ಪತ್ರಿಕಾಗೋಷ್ಠಿಯಲ್ಲಿ ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಇದೇ ಶೈಕ್ಷಣಿಕ ಸಾಲಿನಿಂದಲೇ 10ನೇ ತರಗತಿ ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಶೇ.33ರಷ್ಟು ಅಂಕ ಪಡೆದರೆ ಸಾಕು ವಿದ್ಯಾರ್ಥಿಗಳು ಸುಲಭವಾಗಿ ಪಾಸಾಗಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ.
ಇದು ವಿದ್ಯಾರ್ಥಿಗಳ ತೇರ್ಗಡೆಯ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ, ಸಿಬಿಎಸ್‌ಇ ಮುಂತಾದ ರಾಷ್ಟ್ರೀಯ ಶಿಕ್ಷಣ ಮಂಡಳಿಗಳ ಮಾದರಿಯನ್ನು ಅನುಸರಿಸಲು ಪ್ರಮುಖ ಹೆಜ್ಜೆಯಾಗಿದೆ. ರಾಜ್ಯದ ವಿದ್ಯಾರ್ಥಿಗಳು ಇತರ ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಸಮಾನ ಅವಕಾಶ ಪಡೆಯಬೇಕು ಎಂಬ ಉದ್ದೇಶದಿಂದ ಈ ಬದಲಾವಣೆಯನ್ನು ತರಲಾಗಿದೆ.
ಇದೇ ವರ್ಷದಿಂದಲೇ ಜಾರಿಗೆ
2025-26ನೇ ಶೈಕ್ಷಣಿಕ ಸಾಲಿನಿಂದಲೇ ಈ ಹೊಸ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. ಅಂದರೆ, ಈ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಹಾಜರಾಗುವ ಫ್ರೆಶರ್ ವಿದ್ಯಾರ್ಥಿಗಳು, ರಿಪೀಟರ್‌ಗಳು ಹಾಗೂ ಖಾಸಗಿ ಅಭ್ಯರ್ಥಿಗಳಿಗೆ ಈ ನಿಯಮ ಅನ್ವಯವಾಗಲಿದೆ.
ಇತ್ತಿಚಿನ ವರ್ಷಗಳಲ್ಲಿ ಹಲವು ವಿದ್ಯಾರ್ಥಿಗಳು ಅಲ್ಪ ಅಂಕಗಳ ಅಂತರದಿಂದ ಪಾಸ್ ಆಗದೆ ನಿರಾಶರಾಗುತ್ತಿದ್ದರು. ಈ ಹೊಸ ಕ್ರಮದಿಂದ ಅಂತಹ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯವಾಗಲಿದೆ. ಇನ್ಮುಂದೆ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದಲ್ಲಿ ಕನಿಷ್ಠ ಶೇ.33 ಅಂಕ ಪಡೆದರೆ ಉತ್ತೀರ್ಣರಾಗಲಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡಾ ನೇಮಕಾತಿ | ಪದವೀಧರರಿಗೆ ಮ್ಯಾನೇಜರ್ ಹುದ್ದೆಗಳು
800 ಸಾರ್ವಜನಿಕ ಶಾಲೆಗಳ ಉದ್ಘಾಟನೆ
ಈ ಘೋಷಣೆಯೊಂದಿಗೆ ಮತ್ತೊಂದು ಮಹತ್ವದ ಯೋಜನೆಯನ್ನೂ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ಕರ್ನಾಟಕದಾದ್ಯಂತ 800 ಸರ್ಕಾರಿ ಶಾಲೆಗಳನ್ನು ‘ಕರ್ನಾಟಕ ಸಾರ್ವಜನಿಕ ಶಾಲೆ’ಗಳಾಗಿ (Karnataka Public School – KPS) ಪರಿವರ್ತಿಸಿ ಅಭಿವೃದ್ಧಿಪಡಿಸಲಾಗುತ್ತಿದೆ.
ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ ಹಿಡಿದು ದ್ವಿತೀಯ ಪಿಯುಸಿ ವರೆಗೆ ಒಂದೇ ಸೂರಿನಡಿ ಶಿಕ್ಷಣ ವ್ಯವಸ್ಥೆ ಒದಗಿಸಲಾಗುವುದು. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪ್ರತಿಯೊಂದು ಶಾಲೆಯನ್ನು ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ಮೂಲಸೌಕರ್ಯ, ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್‌ರೂಮ್, ಪ್ಲೇಗ್ರೌಂಡ್ ಸೇರಿದಂತೆ ಎಲ್ಲ ಸೌಲಭ್ಯಗಳೊಂದಿಗೆ ನವೀಕರಿಸಲಾಗುತ್ತಿದೆ.
ಕೇವಲ ಉತ್ತೀರ್ಣ ಪ್ರಮಾಣವನ್ನು ಹೆಚ್ಚಿಸುವುದಲ್ಲ, ವಿದ್ಯಾರ್ಥಿಗಳಿಗೆ ಉತ್ತಮ ಪಾಠ್ಯಕ್ರಮ, ಸೌಕರ್ಯ ಮತ್ತು ಆತ್ಮವಿಶ್ವಾಸ ನೀಡುವುದು ಇದರ ಉದ್ದೇಶವಾಗಿದೆ. ಸರ್ಕಾರಿ ಶಾಲೆಗಳ ಪ್ರತಿಷ್ಠೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಹೊಸ ಶಿಕ್ಷಣ ಮಾದರಿಯನ್ನು ರೂಪಿಸಿದ್ದೇವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಹೊಸ ದಿಕ್ಕು
ರಾಜ್ಯ ಸರ್ಕಾರದ ಈ ಕ್ರಮವು ಶಿಕ್ಷಣ ಕ್ಷೇತ್ರಕ್ಕೆ ಹೊಸ ಉಸಿರಾಗಲಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದರ ಜೊತೆಗೆ, ಪೋಷಕರು ಹಾಗೂ ಶಿಕ್ಷಕರಲ್ಲಿ ಸಹ ನೂತನ ವಿಶ್ವಾಸ ಮೂಡಿಸುವ ನಿರೀಕ್ಷೆಯಿದೆ.
ಇದರಿಂದಾಗಿ, ಕರ್ನಾಟಕದ ಶಾಲಾ ಶಿಕ್ಷಣ ಕ್ರಮ ಕ್ರಮೇಣ ರಾಷ್ಟ್ರ ಮಟ್ಟದ ಮಾನದಂಡಕ್ಕೆೆ ಏರುವ ಸಾಧ್ಯತೆ ಹೆಚ್ಚು. ವಿದ್ಯಾರ್ಥಿಗಳ ಒತ್ತಡ ಕಡಿಮೆಯಾಗಿ, ಸುಲಭ ಕಲಿಕೆಗೆ ಸಮಾನ ಹಾಗೂ ಸ್ಪರ್ಧಾತ್ಮಕ ವಾತಾವರಣ ನಿರ್ಮಾಣವಾಗಲಿದೆ ಎಂಬುದು ಶಿಕ್ಷಣ ಇಲಾಖೆಯ ನಿರೀಕ್ಷೆಯಾಗಿದೆ.
ಇದನ್ನೂ ಓದಿ: ನಿಮ್ಮ ಫೇಸ್‌ಬುಕ್ ಅಕೌಂಟ್ ಅನ್ನು ಸೇಫಾಗಿಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ಸುಲಭ ತಂತ್ರಗಳು...
ಸವಿತಾ ಎಂ.,
ಸುದ್ದಿ ವರದಿಗಾರ
ನಮ್ಮ ಸಮುದಾಯಕ್ಕೆ ಸೇರಿ
ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ
