Udyogatana
ಶಿಕ್ಷಣ

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಫೇಲ್ ಆಗುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ | ಬರಲಿದೆ ಹೊಸ ಪರೀಕ್ಷಾ ಮಾದರಿ

ಸವಿತಾ ಎಂ.,29 Oct 2025, 01:25 pm IST

ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಫೇಲಾಗುವ ವಿದ್ಯಾರ್ಥಿಗಳಿಗೆ ಸಲೀಸಾಗಿ ಪಾಸಾಗಲು ಹೊಸ ಅವಕಾಶ ಕಲ್ಪಿಸಲು ಮುಂದಾಗಿದೆ...

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಫೇಲ್ ಆಗುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ | ಬರಲಿದೆ ಹೊಸ ಪರೀಕ್ಷಾ ಮಾದರಿ

SSLC, PUC Fail Students New Exam Model 2025: ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ತಲಾ ಒಂದೂವರೆಯಿAದ ಎರಡು ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಹೀಗಿದ್ದರೂ ಕೂಡ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಫೇಲ್ ಆಗುತ್ತಾರೆ.

ಹೀಗೆ ಫೇಲಾಗುವ ವಿದ್ಯಾರ್ಥಿಗಳು ಮುಂದಿನ ಶಿಕ್ಷಣ ಪಡೆಯುವ ಆಲೋಚನೆಯಿಂದ ಹಿಂದೆ ಸರಿಯುತ್ತಾರೆ. ಈ ಕಾರಣದಿಂದ ಮುಕ್ತ ಶಾಲಾ ಮಾದರಿಯನ್ನು ಅಳವಡಿಸಿಕೊಳ್ಳಲು ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಇಲಾಖೆಯು ಅಧಿಕೃತ ಮೂಲಗಳು ಖಚಿತಪಡಿಸಿವೆ.

ಉತ್ತೀರ್ಣಕ್ಕೆ ಶೇ.33 ಅಂಕ ಸಾಕು

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಫೇಲಾಗುವ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ದೇಶದಲ್ಲಿಯೇ ಮೊದಲ ಬಾರಿಗೆ ಶಾಲಾ ಶಿಕ್ಷಣದಲ್ಲಿ ಮೂರು ಪರೀಕ್ಷೆ ಪದ್ಧತಿಯನ್ನು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಅಳವಡಿಸಿಕೊಂಡಿದೆ.

ಇದರ ಜತೆಗೆ ಮುಂಬರುವ ಮಾರ್ಚ್/ಏಪ್ರಿಲ್‌ನಲ್ಲಿ ನಡೆಯಲಿರುವ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಕೇಂದ್ರ ಪಠ್ಯಕ್ರಮ ಶಾಲೆಗಳ ಮಾದರಿಯಲ್ಲಿ ಶೇ.33 ಕನಿಷ್ಠ ಉತ್ತೀರ್ಣ ಪದ್ಧತಿಯನ್ನು ಸಹ ಅಳವಡಿಸಿಕೊಂಡಿದೆ.

ಈ ಎರಡೂ ಕಾರಣಗಳಿಂದ ಶಾಲಾ ಪರೀಕ್ಷೆಗಳಲ್ಲಿ ಫಲಿತಾಂಶ ಹೆಚ್ಚಳವಾಗಲಿದ್ದು, ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವವರ ಸಂಖ್ಯೆ ಕಡಿಮೆಯಾಗಬಹುದು. ಇಂತಹ ವಿದ್ಯಾರ್ಥಿಗಳು ವರ್ಷಾನುಗಟ್ಟಲೆ ಕಾಯಬೇಕು. ಇದರ ಬದಲಾಗಿ ಎನ್‌ಐಒಎಸ್ ಮಾದರಿ ಅಳವಡಿಸಿಕೊಂಡು ಪ್ರತ್ಯೇಕ ಪರೀಕ್ಷೆ ನಡೆಸಬಹುದು ಎಂದು ಆಲೋಚಿಸಲಾಗಿದೆ.

ಏನಿದು ಎನ್‌ಐಒಎಸ್ ಮಾದರಿ?

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಕ್ಕೆ ವ್ಯರ್ಥವಾಗಿ ಮತ್ತೊಂದು ವರ್ಷ ಕಾಯುವುದನ್ನು ತಪ್ಪಿಸುವುದಕ್ಕಾಗಿ ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆ (NIOS) ಮಾದರಿಯಲ್ಲಿ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಚಿಂತನೆ ನಡೆಸುತ್ತಿದೆ.

ಸಾಮಾನ್ಯವಾಗಿ ಮುಕ್ತ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಾರ್ಷಿಕ ಎರಡು ಬಾರಿ ಜಿಲ್ಲಾ ಹಂತದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದೇ ಮಾದರಿಯನ್ನು ಪರೀಕ್ಷಾ ಸುಧಾರಣೆ ದೃಷ್ಟಿಯಿಂದ ಏಕೆ ಅಳವಡಿಸಿಕೊಳ್ಳಬಾರದು ಎಂಬುದರ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎದುರು ನೋಡುತ್ತಿದೆ.

ಇದರಿಂದ ವಿದ್ಯಾರ್ಥಿಗಳಿಗೆ ಆಗುವ ಲಾಭವೇನು?

ಜಿಲ್ಲಾ ಹಂತದಲ್ಲಿ ಪರೀಕ್ಷೆ ನಡೆಸಿ ಅದಷ್ಟು ಶೀಘ್ರವಾಗಿ ಫಲಿತಾಂಶವನ್ನು ಪ್ರಕಟಿಸಿವುದರಿಂದ ಉನ್ನತ ಶಿಕ್ಷಣ, ಔದ್ಯೋಗಿಕ ಶಿಕ್ಷಣ ಅಥವಾ ಕನಿಷ್ಠ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆಧಾರದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಬ್ಯಾಂಕ್‌ಗಳಲ್ಲಿ ಸಾಲ-ಸೌಲಭ್ಯಗಳನ್ನು ಪಡೆಯುವುದು ಸೇರಿ ಹತ್ತಾರು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ವರ್ಷಾನುಗಟ್ಟಲೆ ಮತ್ತೊಂದು ಪರೀಕ್ಷೆಗಾಗಿ ಕಾಯುವುದರಿಂದ ಕಲಿಕೆಯಲ್ಲಿ ಈಗಾಗಲೇ ಹಿಂದುಳಿದಿರುವ ವಿದ್ಯಾರ್ಥಿಗಳೂ ಶೈಕ್ಷಣಿಕ ದೃಷ್ಟಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು.

ಈ ಬಾರಿಯಿಂದ ಖಾಸಗಿ ಮತ್ತು ಪುನರಾವರ್ತಿತ ಅಭ್ಯರ್ಥಿಗಳು ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳಲು ಆನ್‌ಲೈನ್‌ನಲ್ಲಿ ಅವಕಾಶ ಮಾಡಿಕೊಟ್ಟಿದೆ. ಇದರ ಮುಂದುವರಿದ ಭಾಗವಾಗಿ ಎನ್‌ಐಒಎಸ್ ಮಾದರಿ ಕೂಡ ಅಳವಡಿಸಿಕೊಳ್ಳುವುದು ಇಲಾಖೆಯ ಗುರಿಯಾಗಿದೆ.

ಸವಿತಾ ಎಂ.,

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#ಕರ್ನಾಟಕಶಿಕ್ಷಣ#ಎಸ್‌ಎಸ್‌ಎಲ್‌ಸಿ#ದ್ವಿತೀಯಪಿಯುಸಿ#ಹೊಸಪರೀಕ್ಷಾಮಾದರಿ#ಮುಕ್ತಶಾಲಾಮಾದರಿ#ಪರೀಕ್ಷಾಸುದ್ದಿ#ಪರೀಕ್ಷಾಸುಧಾರಣೆ#KarnatakaEducation#SSLC#PUC#ExamReform#NIOSModel#EducationNews#NewExamSystem#SSLCFailStudents#PUCFailStudents#ExamUpdates
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...