Udyogatana
ಸರ್ಕಾರಿ ಸ್ಕೀಮ್

Revenue Department Pension Schemes- ಕಂದಾಯ ಇಲಾಖೆಯ ಪಿಂಚಣಿ ಯೋಜನೆಗಳು | ಯಾರಿಗೆ ಎಷ್ಟು ಪಿಂಚಣಿ? ಅರ್ಜಿ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ...

ಮಾಲತೇಶ್ ಮಾಳಮ್ಮನವರ್24 Dec 2025, 12:59 pm IST

ಕಂದಾಯ ಇಲಾಖೆಯ ಮೂಲಕ ಚಾಲಗೊಳಿಸಲಾದ ವಿವಿಧ ಪಿಂಚಣಿ ಯೋಜನೆಗಳು, ಫಲಾನುಭವಿಗಳ ಆಯ್ಕೆ, ಪಿಂಚಣಿ ಮೊತ್ತ, ಅರ್ಹತೆಗಳು, ಅಗತ್ಯ ದಾಖಲಾತಿಗಳ ಸಂಪೂರ್ಣ ವಿವರ ಇಲ್ಲಿದೆ...

Revenue Department Pension Schemes- ಕಂದಾಯ ಇಲಾಖೆಯ ಪಿಂಚಣಿ ಯೋಜನೆಗಳು | ಯಾರಿಗೆ ಎಷ್ಟು ಪಿಂಚಣಿ? ಅರ್ಜಿ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ...

Revenue Department Pension Schemes: ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು ಸಮಾಜದ ದುರ್ಬಲರು, ಅಶಕ್ತರು, ಬಾಧಿತರು ಹಾಗೂ ಸಂತ್ರಸ್ತರ ನೆರವಿಗಾಗಿ ಹಲವು ಸಾಮಾಜಿಕ ಭದ್ರತೆ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

ಕಂದಾಯ ಇಲಾಖೆಯ ಮೂಲಕ ಈ ಎಲ್ಲಾ ಯೋಜನೆಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮಾಸಿಕ ಪಿಂಚಣಿ, ಪ್ರೋತ್ಸಾಹಧನ, ಸಹಾಯಧನಗಳನ್ನು ನೀಡಲಾಗುತ್ತದೆ.

ಸದರಿ ಕಂದಾಯ ಇಲಾಖೆಯ ಮೂಲಕ ಚಾಲಗೊಳಿಸಲಾಗುತ್ತಿರುವ ವಿವಿಧ ಯೋಜನೆ, ಕಾರ್ಯಕ್ರಮಗಳ ಸಂಪೂರ್ಣ ಪಟ್ಟಿ ಸಹಿತ ಫಲಾನುಭವಿಗಳ ಆಯ್ಕೆಗೆ ಅನುಸರಿಸಲಾಗುತ್ತಿರುವ ಮಾನದಂಡಗಳ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ:

1. Old Age Pension - ವೃದ್ಧಾಪ್ಯ ವೇತನ ಯೋಜನೆ

ಬಡತನ ರೇಖೆಗಿಂತ ಕೆಳಗಿರುವ ಸಂಕಷ್ಟದಲ್ಲಿರುವ ಹಿರಿಯ ನಾಗರೀಕರಿಗೆ ನೆರವು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ವೃದ್ಧಾಪ್ಯ ವೇತನ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ಅರ್ಹ ವಯೋವೃದ್ಧರಿಗೆ ವಯಸ್ಸಿಗೆ ಅನುಗುಣವಾಗಿ ಮಾಸಿಕ ಪಿಂಚಣಿ ಹೀಗಿದೆ:

  • 60 ರಿಂದ 84 ವರ್ಷ: 600 ರೂ.

  • 85 ವರ್ಷ ಮೇಲ್ಪಟ್ಟು: 1000 ರೂ.

ಸಂಧ್ಯಾ ಸುರಕ್ಷಾ ಯೋಜನೆಯಡಿ ರೂ. 1000/- ರಿಂದ ರೂ. 200/- ಕೈ ಹೆಚ್ಚಿಸಿರುವಂತೆ ವೃದ್ಧಾಪ್ಯ ವೇತನ ಯೋಜನೆಯ (85 ವರ್ಷ ಮೇಲ್ಪಟ್ಟವರಿಗೆ) ಪಿಂಚಣಿ ಹೆಚ್ಚಳಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಅರ್ಹತೆಗಳು: 60 ವರ್ಷ ಮೇಲ್ಪಟ್ಟ ಗ್ರಾಮೀಣ ಹಾಗೂ ನಗರ ಪ್ರದೇಶದ ಹಿರಿಯ ನಾಗರೀಕರು ಈ ಯೋಜನೆಗೆ ಅರ್ಹರು. ಪರಿಷ್ಕೃತ ವಾರ್ಷಿಕ ಆದಾಯ ಮಿತಿ ದಿನಾಂಕ: 10-02-2021ರ ಅನ್ವಯ ಕುಟುಂಬದ ಆದಾಯವು ರೂ. 32,000/-ಗಳಿಗಿಂತ ಕಡಿಮೆ ಇರಬೇಕು.

ಅಗತ್ಯ ದಾಖಲಾತಿಗಳು: ಆಧಾರ್ ಕಾರ್ಡ್ ಪ್ರತಿ, ವಯಸ್ಸಿನ ದೃಢೀಕೃತ ದಾಖಲೆ, ವಿಳಾಸಕ್ಕೆ ಸಂಬಂಧಿಸಿದ ದೃಢೀಕೃತ ಹಾಗೂ ಬ್ಯಾಂಕ್/ಅಂಚೆ ಖಾತೆ ಪ್ರತಿಯೊಂದಿಗೆ ತಾಲ್ಲೂಕಿನ ಹೋಬಳಿ ಉಪ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬಹುದಾಗಿದೆ.

2 Widow Pension - ವಿಧವಾ ವೇತನ ಯೋಜನೆ

ನಿರ್ಗತಿಕ ವಿಧವೆಯರಿಗೆ ಆರ್ಥಿಕ ಸಹಾಯ ಒದಗಿಸುವ ಉದ್ದೇಶದಿಂದ ವಿಧವಾ ವೇತನ ನೀಡಲಾಗುತ್ತಿದೆ. ಈ ಯೋಜನೆಯಡಿ ಅರ್ಹ ಮಹಿಳೆಯರಿಗೆ ಮಾಸಿಕ 800 ರೂ. ನಗದು ನೆರವು ಒದಗಿಸಲಾಗುತ್ತದೆ.

ಅರ್ಹತೆಗಳು: ಗ್ರಾಮೀಣ ಹಾಗೂ ನಗರ ಪ್ರದೇಶದ 18 ವರ್ಷ ಮೇಲ್ಪಟ್ಟ ವಿಧವೆಯರು ಈ ಯೋಜನೆಗೆ ಅರ್ಹರಾಗಿದ್ದಾರೆ. ಪರಿಷ್ಕೃತ ವಾರ್ಷಿಕ ಆದಾಯ ಮಿತಿ ದಿನಾಂಕ: 10-02-2021ರ ಅನ್ವಯ ಕುಟುಂಬದ ಆದಾಯವು ರೂ. 32,000/-ಗಳಿಗಿಂತ ಕಡಿಮೆ ಇರಬೇಕು.

ಅಗತ್ಯ ದಾಖಲಾತಿಗಳು: ಆಧಾರ್ ಕಾರ್ಡ್ ಪ್ರತಿ, ವಿಳಾಸಕ್ಕೆ ಸಂಬAಧಿಸಿದ ದೃಢೀಕೃತ ದಾಖಲೆ, ಪತಿಯ ಮರಣ ದೃಢಿಕರಣ ಪತ್ರ/ಸ್ವಯಂ ದೃಢಿಕರಣ ಪತ್ರ ಹಾಗೂ ಬ್ಯಾಂಕ್/ಅAಚೆ ಖಾತೆ ಪ್ರತಿಯೋಂದಿಗೆ ತಾಲ್ಲೂಕಿನ ಹೋಬಳಿ ಉಪ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬಹುದು.

3. Disability Pension - ಅಂಗವಿಕಲ ವೇತನ ಯೋಜನೆ

ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಅಂಗವಿಕಲ ವೇತನ ನೀಡಲಾಗುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಅಂಗವಿಕಲರಿಗೆ ಅಂಗವಿಕಲತೆತೆಯ ಪ್ರಮಾಣದ ಆಧಾರದ ಮೇಲೆ ಈ ಕೆಳಗಿನಂತೆ ಮಾಸಿಕ ಪಿಂಚಣಿ ನೀಡಲಾಗುತ್ತದೆ:

  • ಶೇ.40 ಅಂಗವಿಕಲತೆ ಹೊಂದಿರುವವರಿಗೆ: 800 ರೂ.

  • ಶೇ.75 ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವವರಿಗೆ: 1400 ರೂ.

ಅರ್ಹತೆಗಳು: ಕುಟುಂಬದ ಆದಾಯವು ರೂ. 32,000/-ಗಳಿಗಿಂತ ಕಡಿಮೆ ಇರುವ ಗ್ರಾಮೀಣ ಹಾಗೂ ನಗರ ಪ್ರದೇಶದ ಅಂಗವಿಕಲೆ ಹೊಂದಿರುವವರು ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಅಗತ್ಯ ದಾಖಲಾತಿಗಳು: ಆಧಾರ್‌ಕಾರ್ಡ್ ಪ್ರತಿ, ವಯಸ್ಸಿನ ದೃಢೀಕೃತ ದಾಖಲೆ, ವಿಳಾಸಕ್ಕೆ ಸಂಬಂಧಿಸಿದ ದೃಢೀಕೃತ ದಾಖಲೆ, ಬ್ಯಾಂಕ್/ಅಂಚೆ ಖಾತೆ ಪ್ರತಿ ಹಾಗೂ ಅಂಗವಿಕಲತೆ ಶೇಕಡಾವಾರು ವೈದ್ಯಕೀಯ ದೃಢೀಕರಣ ಪತ್ರದೊಂದಿಗೆ ತಾಲ್ಲೂಕಿನ ಹೋಬಳಿ ಉಪ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬಹುದಾಗಿದೆ.

4. Sandhya Suraksha Scheme - ಸಂಧ್ಯಾ ಸುರಕ್ಷಾ ವೇತನ ಯೋಜನೆ

65 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರೀಕರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಹಾಗೂ ಸಮಾಜದ ಮುಖ್ಯವಾಹಿನಿಗೆ ತರುವುದು ಉದ್ದೇಶದಿಂದ ‘ಸಂಧ್ಯಾ ಸುರಕ್ಷಾ’ ಯೋಜನೆ ಅಡಿಯಲ್ಲಿ ಮಾಸಿಕ 1,200 ರೂ. ಪಿಂಚಣಿ ಕೊಡಲಾಗುತ್ತದೆ.

ಅರ್ಹತೆಗೆಗಳು: ಕುಟುಂಬದ ಆದಾಯವು ರೂ. 32,000/-ಗಳಿಗಿಂತ ಕಡಿಮೆ ಇರುವ ಗ್ರಾಮೀಣ ಹಾಗೂ ನಗರ ಪ್ರದೇಶದ 65 ವರ್ಷ ಮೆಲ್ಪಟ್ಟ ಹಿರಿಯ ನಾಗರಿಕರು ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಅಗತ್ಯ ದಾಖಲಾತಿಗಳು: ಆಧಾರ್‌ಕಾರ್ಡ್ ಪ್ರತಿ, ವಯಸ್ಸಿನ ದೃಢೀಕೃತ ದಾಖಲೆ, ವಿಳಾಸಕ್ಕೆ ಸಂಬಂಧಿಸಿದ ದೃಢೀಕೃತ ಮತ್ತು ಬ್ಯಾಂಕ್/ಅಂಚೆ ಖಾತೆ ಪ್ರತಿಯೊಂದಿಗೆ ತಾಲ್ಲೂಕಿನ ಹೋಬಳಿ ಉಪ ತಹಶೀಲ್ದಾರರಿಗೆ ಅರ್ಜಿ ಸಲ್ಲಿಕೆ ಮಾಡಬಹುದು.

5. Manaswini Scheme - ಮನಸ್ವಿನಿ ಯೋಜನೆ ಯೋಜನೆ

ಅವಿವಾಹಿತ, ವಿಚ್ಛೇದಿತ, ಪರಿತ್ಯಕ್ತ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ಒದಗಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ‘ಮನಸ್ವಿ’ ಯೋಜನೆಯಡಿ ಅರ್ಹ ಮಹಿಳೆಯರಿಗೆ ಮಾಸಿಕ 600 ರೂ. ವೇತನ ನೀಡಲಾಗುತ್ತದೆ.

ಅರ್ಹತೆಗಳು: ಗ್ರಾಮೀಣ ಹಾಗೂ ನಗರ ಪ್ರದೇಶದ40 ರಿಂದ 64 ವರ್ಷ ವಯಸ್ಸಿನೊಳಗಿನ ಅವಿವಾಹಿತ ಮಹಿಳೆಯರು, ವಿಚ್ಛೇದಿತ ಮಹಿಳೆಯರು ಈ ಯೋಜನೆಗೆ ಅರ್ಹರು. ಕುಟುಂಬದ ಆದಾಯ ರೂ. 32,000/-ಗಳಿಗಿಂತ ಕಡಿಮೆ ಇರಬೇಕು.

ಅಗತ್ಯ ದಾಖಲಾತಿಗಳು: ಅರ್ಜಿ ಹಾಕಲು ಆಧಾರ್ ಕಾರ್ಡ್ ಪ್ರತಿ, ವಯಸ್ಸಿನ ದೃಢೀಕೃತ ದಾಖಲೆ, ವಿಳಾಸಕ್ಕೆ ಸಂಬಂಧಿಸಿದ ದೃಢೀಕೃತ, ಬ್ಯಾಂಕ್/ಅಂಚೆ ಖಾತೆ ಪ್ರತಿ, ವಿಚ್ಛೇದಿತ ಪ್ರಮಾಣ ಪಡೆಯವಿದ್ದಲ್ಲ ಸ್ವಯಂ ದೃಢೀಕರಣ ಪತ್ರಗಳ ಜೊತೆಗೆ ತಾಲ್ಲೂಕಿನ ಹೋಬಳಿ ಉಪ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬಹುದು.

6. Maitri Scheme - ಮೈತ್ರಿ ಯೋಜನೆ

ಅಂಗತ್ವ ಅಲ್ಪಸಂಖ್ಯಾತರಿಗೆ ಆರ್ಥಿಕ ಸಹಾಯವನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ‘ಮೈತ್ರಿ’ ಯೋಜನೆಯಡಿ ಮಾಸಿಕ 600 ರೂ. ಗೌರವ ವೇತನ ನೀಡಲಾಗುತ್ತದೆ.

ಅರ್ಹತೆಗಳು: ಗ್ರಾಮೀಣ ಹಾಗೂ ನಗರ ಪ್ರದೇಶದ 25 ರಿಂದ 64 ವರ್ಷ ವಯಸ್ಸಿನೊಳಗಿನ ಅಂಗತ್ವ ಅಲ್ಪ ಸಂಖ್ಯಾತರು ಈ ಯೋಜನೆಗೆ ಅರ್ಹರು. ಕುಟುಂಬದ ಆದಾಯ ರೂ. 32,000/-ಗಳಿಗಿಂತ ಕಡಿಮೆ ಇರಬೇಕು.

ಅಗತ್ಯ ದಾಖಲಾತಿಗಳು: ಆಧಾರ್ ಕಾರ್ಡ್ ಪ್ರತಿ, ವಿಳಾಸಕ್ಕೆ ಸಂಬಂಧಿಸಿದ ದೃಢೀಕೃತ, ಬ್ಯಾಂಕ್/ಅಂಚೆ ಖಾತೆ ಪ್ರತಿ, ಸ್ವಯಂ ದೃಢೀಕರಣ ಪತ್ರ ಹಾಗೂ ಸಮುದಾಯ ಆಧಾರಿತ ಸಂಸ್ಥೆಗಳಾದ ‘ಸಂಗಮ’ ಮತ್ತು ‘ಕೆ.ಎಸ್.ಎಂ.ಎಫ್’ನಿಂದ ಪಡೆದ ಪ್ರಮಾಣ ಪತ್ರದೊಂದಿಗೆ ತಾಲ್ಲೂಕಿನ ಹೋಬಳಿ ಉಪ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು.

7. Farmer Widow Pension - ರೈತ ವಿಧವಾ ಮಾಸಾಶನ ಯೋಜನೆ

ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಮೃತ ರೈತನ ಪತ್ನಿಗೆ ಮಾಸಿಕ 2,000 ರೂ. ಪಿಂಚಣಿ ನೀಡಲಾಗುತ್ತದೆ.

ಅರ್ಹತೆಗಳು: ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ಮೃತ ರೈತನ ಪತ್ನಿಯಾಗಿದ್ದು, ಕೃಷಿ ಇಲಾಖೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳಡಿ ಗುರುತಿಸಿ ಪರಿಹಾರ ಪಡೆದುಕೊಂಡಿರುವವರು ಆಗಿರಬೇಕು.

ಅಗತ್ಯ ದಾಖಲಾತಿಗಳು: ಆಧಾರ್‌ಕಾರ್ಡ್ ಪ್ರತಿ, ವಿಳಾಸಕ್ಕೆ ಸಂಬಂಧಿಸಿದ ದೃಢೀಕೃತ, ಬ್ಯಾಂಕ್/ಅಂಚೆ ಖಾತೆ ಪ್ರತಿ ಹಾಗೂ ಕೃಷಿ ಇಲಾಖೆಯಿಂದ ಪರಿಹಾರ ಪಡೆದ ಬಗ್ಗೆ ಆದೇಶ ಪ್ರತಿಯೊಂದಿಗೆ ತಾಲ್ಲೂಕಿನ ಹೋಬಳಿ ಉಪ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬಹುದು.

8. Acid Attack Victims Pension - ಅಸಿಡ್ ದಾಳಿ ಮಹಿಳೆಯರಿಗೆ ಸಹಾಯಧನ ಯೋಜನೆ

ಆಸಿಡ್ ದಾಳಿಗೆ ಒಳಗಾದ ಎಲ್ಲಾ ಮಹಿಳೆಯರಿಗೆ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡುವ ಹಾಗೂ ಸಮಾಜದಲ್ಲಿ ಗೌರವಪೂರ್ವಕವಾಗಿ ಬದುಕಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಮಾಇಕ 3,000 ರೂ. ನೆರವು ನೀಡಲಾಗುತ್ತದೆ.

ಅರ್ಹತೆಗಳು: ಆಸಿಡ್ ಭಾದಿತ ಮಹಿಳೆಯಾಗಿದ್ದು; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ-ಇಲಾಖೆಯಿಂದ ಈಗಾಗಲೇ ಗುರುತಿಸಿ ಸುರಕ್ಷಾ ಯೋಜನೆಯಡಿ ಪರಿಹಾರ ಪಡೆದುಕೊಂಡಿರುವವರು ಈ ಯೋಜನೆಗೆ ಅರ್ಹರು.

ಅಗತ್ಯ ದಾಖಲಾತಿಗಳು: ಆಧಾರ್ ಕಾರ್ಡ್, ವಿಳಾಸಕ್ಕೆ ಸಂಬಂಧಿಸಿದ ದೃಢೀಕೃತ ದಾಖಲೆ, ಬ್ಯಾಂಕ್/ಅಂಚೆ ಖಾತೆ ಪ್ರತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪರಿಹಾರ ಪಡೆದ ಬಗ್ಗೆ ಆದೇಶ ಪ್ರತಿಯೊಂದಿಗೆ ತಾಲ್ಲೂಕಿನ ಹೋಬಳಿ ಉಪ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬಹುದು.

9. Endosulfan Victims Pension - ಎಂಡೋಸಲ್ಫಾನ್ ಸಂತ್ರಸ್ತರಿಗೆ ಮಿತವೇತನ ಯೋಜನೆ

ಎಂಡೋಸಲ್ಫಾನ್ ಸಂತ್ರಸ್ತರಿಗೆ ಶೇ.25 ರಿಂದ ಶೇ.59 ಅಂಗವಿಕಲತೆ ಹೊಂದಿರುವವರಿಗೆ 2,000 ರೂ. ಹಾಗೂ ಶೇ.80 ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವವರಿಗೆ 4,000 ರೂ. ಮಾಶಾಸನ ನೀಡಲಾಗುತ್ತದೆ.

ಅರ್ಹತೆಗಳು: ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ಎಂಡೋಸಲ್ಫಾನ್ ಸಂತ್ರಸ್ಥರಿಗೆ ಈ ಆರ್ಥಿಕ ಸಹಾಯ ಒದಗಿಸಲಾಗುತ್ತದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗುರುತಿಸಿರುವ ಫಲಾನುಭವಿಗಳಾಗಿರಬೇಕು.

ಅಗತ್ಯ ದಾಖಲಾತಿಗಳು: ಆಧಾರ್‌ಕಾರ್ಡ್ ಪ್ರತಿ, ವಿಳಾಸಕ್ಕೆ ಸಂಬಂಧಿಸಿದ ದೃಢ ದಾಖಲೆ ಹಾಗೂ ಬ್ಯಾಂಕ್/ಅಂಚೆ ಖಾತೆ ಪ್ರತಿಯೊಂದಿಗೆ ತಾಲ್ಲೂಕಿನ ಹೋಬಳಿ ಉಪ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬಹುದಾಗಿದೆ.

10. National Family Benefit Scheme - ರಾಷ್ಟ್ರೀಯ ಕುಟುಂಬ ನೆರವು ಯೋಜನೆ

ಈ ಯೋಜನೆಯ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ದುಡಿಯುವ ಮುಖ್ಯ ವ್ಯಕ್ತಿಯ ಮರಣವಾದಲ್ಲಿ ಆ ಕುಟುಂಬಕ್ಕೆ 20,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ.

ಅರ್ಹತೆಗಳು: ಮೃತ ವ್ಯಕ್ತಿಯು 18 ಕ್ಕಿಂತ ಹೆಚ್ಚಿಗೆ ಮತ್ತು 50ಕ್ಕಿಂತ ಕಡಿಮೆ ವಯೋಮಿತಿಯವರಾಗಿರಬೇಕು.

ಅಗತ್ಯ ದಾಖಲಾತಿಗಳು: ಮರಣ ಪ್ರಮಾಣ ಪತ್ರ, ಪಡಿತರ ಚೀಟಿ, ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳೊಂದಿಗೆ ತಾಲ್ಲೂಕಿನ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

11. Funeral Assistance Scheme - ಅಂತ್ಯ ಸಂಸ್ಕಾರ ಯೋಜನೆ

ಅಂತ್ಯ ಸಂಸ್ಥಾರ ಯೋಜನೆ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರು ಮೃತಪಟ್ಟಲ್ಲಿ ಅವರ ಅಂತಿಮ ಕ್ರಿಯೆಗಾಗಿ 5,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ.

ಅರ್ಹತೆಗಳು: ಮೃತ ವ್ಯಕ್ತಿಯು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರಾಗಿರಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕುಟುಂಬದ ಆದಾಯ 32,000 ರೂ. ಗಳಿಗಿಂತ ಕಡಿಮೆ ಇರಬೇಕು.

ಅಗತ್ಯ ದಾಖಲಾತಿಗಳು: ಪಡಿತರ ಚೀಟಿ ಮತ್ತು ಅರ್ಜೀದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಾಲ್ಲೂಕಿನ ತಹಶೀಲ್ದಾರರಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

12. Adarsha Vivaha Scheme - ಆದರ್ಶ ವಿವಾಹ ಯೋಜನೆ

ಇದು ಸರಳ ಸಾಮೂಹಿಕ ವಿವಾಹ ಪ್ರೋತ್ಸಾಹಿಸುವ ಯೋಜನೆಯಾಗಿದ್ದು; ನಗರ ಪ್ರದೇಶದಲ್ಲಿ ಕನಿಷ್ಠ 25 ವಿವಾಹಗಳು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕನಿಷ್ಠ 10 ವಿವಾಹಗಳು ನಡೆದ ಕಾರ್ಯಕ್ರಮದಲ್ಲಿ ವಿವಾಹವಾಗುವ ಜೋಡಿಗೆ ತಲಾ 10,000 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ.

ಅಗತ್ಯ ದಾಖಲಾತಿಗಳು: ವಯಸ್ಸಿನ ಪ್ರಮಾಣ ಪತ್ರ, ವಿವಾಹ ಪ್ರಮಾಣ ಪತ್ರ, ವಧುವಿನ ಬ್ಯಾಂಕ್ ಖಾತೆ ಪ್ರತಿ ಹಾಗೂ ಸಂಘಟನಕಾರರಿಂದ ದೃಢೀಕರಿಸಿದ ಸಾಮೂಹಿಕ ವಿವಾಹದಲ್ಲಿ ವಿವಾಹವಾದ ಬಗ್ಗೆ ಜೋಡಿಗಳ ಪಟ್ಟಿಯೊಂದಿಗೆ ತಾಲ್ಲೂಕಿನ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬಹುದಾಗಿದೆ.

How to apply? - ಹೇಗೆ ಅರ್ಜಿ ಸಲ್ಲಿಸಬೇಕು?

ಈ ಎಲ್ಲಾ ಯೋಜನೆಗಳಿಗೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರ ಮೂಲ ಈ ಎಲ್ಲಾ ಯೋನನೆಗಳು ಅನುಷ್ಠಾನಾಧಿಕಾರಿಗಳಾಗಿದ್ದಾರೆ. ಉದ್ದೇಶಿತ ಫಲಾನುಭವಿಯು ಸಂಬಂಧಪಟ್ಟ ದಾಖಲಾತಿಗಳೊಂದಿಗೆ ತಮ್ಮ ವಾಸಸ್ಥಳದ ಹತ್ತಿರದಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರ, ನಾಡ ಕಛೇರಿಗೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಹೆಚ್ಚಿನ ಮಾಹಿತಿ ಪಡೆಯಲು ಫಲಾನುಭವಿಗಳು ತಾಲ್ಲೂಕಿನ ಆಯಾ ಹೋಬಳಿಯ ಉಪ ತಹಶೀಲ್ದಾರರು ಹಾಗೂ ತಹಶೀಲ್ದಾರರ ಕಚೇರಿ ಸಂಪರ್ಕಿಸಿ ಸೂಕ್ತ ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.

ಮಾಲತೇಶ್ ಮಾಳಮ್ಮನವರ್

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#ಕಂದಾಯಇಲಾಖೆ#ಪಿಂಚಣಿಯೋಜನೆಗಳು#ಸಾಮಾಜಿಕಭದ್ರತೆ#ವೃದ್ಧಾಪ್ಯವೇತನ#ವಿಧವಾವೇತನ#ಅಂಗವಿಕಲವೇತನ#ಸಂಧ್ಯಾಸುರಕ್ಷಾ#ಮನಸ್ವಿನಿಯೋಜನೆ#ಮೈತ್ರಿಯೋಜನೆ#ರೈತವಿಧವಾಪಿಂಚಣಿ#ಆಸಿಡ್_ದಾಳಿಸಂತ್ರಸ್ತರು#ರಾಷ್ಟ್ರೀಯಕುಟುಂಬನೆರವು#ಆದರ್ಶವಿವಾಹಯೋಜನೆ#ಸರ್ಕಾರಿಯೋಜನೆಗಳು#RevenueDepartment#PensionSchemes#SocialSecuritySchemes#OldAgePension#WidowPension#DisabilityPension#SandhyaSuraksha#ManaswiniScheme#MythriScheme#FarmerWidowPension#AcidAttackVictims#EndosulfanVictims#NationalFamilyBenefitScheme#FuneralAssistanceScheme#AdarshaVivahaScheme#GovernmentSchemes#KarnatakaGovernment#ಅಂತ್ಯಸಂಸ್ಕಾರಯೋಜನೆ#ಎಂಡೋಸಲ್ಫಾನ್_ಸಂತ್ರಸ್ತರು
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...