ಪಿಯುಸಿ ಪಾಸಾದವರಿಗೆ ರೈಲ್ವೆಯಲ್ಲಿ ಉದ್ಯೋಗ | 3,058 ಹುದ್ದೆಗಳಿಗೆ ಅರ್ಜಿ ಆಹ್ವಾನ
ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯ 3,058 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಕೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...

Railway NTPC 3058 Jobs: ರೈಲ್ವೆ ಇಲಾಖೆಯಲ್ಲಿ ಬಹು ಬೇಡಿಕೆಯ ನಾನ್ ಟೆಕ್ನಿಕಲ್ ಪ್ಯಾಪುಲರ್ ಕೆಟಗರಿಯ (NTPC) ಪದವಿ ಪೂರ್ವ ವಿದ್ಯಾರ್ಹತೆಯ ಹುದ್ದೆಗಳಿಗೆ ಅಕ್ಟೋಬರ್ 28ರಂದು ಅಧಿಸೂಚನೆ ಪ್ರಕಟವಾಗಿದೆ. ಈ ಅಧಿಸೂಚನೆ ಮೂಲಕ ಒಟ್ಟು 3,058 ಸ್ಥಾನಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಲು ನವೆಂಬರ್ 27 ಕೊನೆಯ ದಿನವಾಗಿದೆ.
ಒಟ್ಟು 8,508 ಹುದ್ದೆಗಳು
ಇದೇ ವಿಭಾಗದಲ್ಲಿ ಪದವಿ ವಿದ್ಯಾರ್ಹತೆಯ 5,800 ಹುದ್ದೆಗಳಿಗೆ ಈಗಾಗಲೇ ಅಧಿಸೂಚನೆ ಪ್ರಕಟವಾಗಿದ್ದು, ಅರ್ಜಿ ಸಲ್ಲಿಕೆಗೆ ನವೆಂಬರ್ 20ರವರೆಗೆ ಅವಕಾಶ ನೀಡಲಾಗಿದೆ. ಈವೆರಡೂ ಅಧಿಸೂಚನೆಗಳ ಮೂಲಕ ರೈಲ್ವೆ ನೇಮಕಾತಿ ಮಂಡಳಿಯು (RRB) ಎನ್‌ಟಿಪಿಸಿ ವಿಭಾಗದಲ್ಲಿಯೇ ಒಟ್ಟು 8,508 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ.
ದೇಶಾದ್ಯಂತ ಒಟ್ಟು 21 ರೈಲ್ವೆ ನೇಮಕಾತಿ ಮಂಡಳಿಗಳಲ್ಲಿ ಈ ಹುದ್ದೆಗಳು ಖಾಲಿಯಿವೆ. ಬೆಂಗಳೂರಿನಲ್ಲಿ ಒಟ್ಟು 54 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಸಿದ್ಧರಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ಕಮರ್ಷಿಯಲ್ ಟಿಕೆಟ್ ಕ್ಲರ್ಕ್ | 2,424 |
ಅಕೌಂಟ್ಸ್ ಕ್ಲರ್ಕ್ ಕಂ ಟೈಪಿಸ್ಟ್ | 394 |
ಜೂನಿಯರ್ ಕ್ಲರ್ಕ್ ಕಂ ಟೈಪಿಸ್ಟ್ | 163 |
ಟ್ರೇನ್ಸ್ ಕ್ಲರ್ಕ್ | 77 |
ಒಟ್ಟು ಹುದ್ದೆಗಳು | 3,058 |
ವಿದ್ಯಾರ್ಹತೆ
ಮೊದಲೇ ಹೇಳಿದಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನದೊಳಗಾಗಿ ದ್ವಿತೀಯ ಪಿಯು ಹಾಗೂ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು. ಆಯ್ಕೆ ಪ್ರಕ್ರಿಯೆಗೆ ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಟೈಪಿಸ್ಟ್ ಹುದ್ದೆಗಳಿಗೆ ಕೌಶಲ ಪರೀಕ್ಷೆ ಇರಲಿದೆ.
ಮಾಸಿಕ ವೇತನ ಎಷ್ಟು?
ರೈಲ್ವೇ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ನಿಗದಿ ಮಾಡಲಾಗಿದೆ. ವೇತನದ ಜೊತೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯವಾಗುವ ಭತ್ಯೆಗಳು ಅನ್ವಯಿಸಲಿವೆ. ಆರಂಭಿಕ ವೇತನ ಹೀಗಿದೆ:
ಕಮರ್ಷಿಯಲ್ ಟಿಕೆಟ್ ಕ್ಲರ್ಕ್ | ₹21,700 |
ಅಕೌಂಟ್ಸ್ ಕ್ಲರ್ಕ್ ಕಂ ಟೈಪಿಸ್ಟ್ | ₹19,900 |
ಜೂನಿಯರ್ ಕ್ಲರ್ಕ್ ಕಂ ಟೈಪಿಸ್ಟ್ | ₹19,900 |
ಟ್ರೇನ್ಸ್ ಕ್ಲರ್ಕ್ | ₹19,900 |
ವಯೋಮಿತಿ ಮತ್ತು ಅರ್ಜಿ ಶುಲ್ಕದ ವಿವರ
18ರಿಂದ 30 ವಯೋಮಾನದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯಾ ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.
ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದ್ದು; ಇತರ ವರ್ಗದ ಅಭ್ಯರ್ಥಿಗಳಿಗೆ 250 ರೂ. ಶುಲ್ಕ ನಿಗದಿಪಡಿಸಲಾಗಿದೆ. ಮೊದಲ ಹಂತದ ಕಂಪ್ಯೂಟರ್ ಪರೀಕ್ಷೆಗೆ ಹಾಜರಾದವರಿಗೆ ಶುಲ್ಕವನ್ನು ಮರುಪಾವತಿಸಲಾಗುತ್ತದೆ.
ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆ ಲಿಂಕ್: rrbbnc.gov.in
ನಾಗರಾಜ್ ಯು ಎಂ.,
ಸುದ್ದಿ ವರದಿಗಾರ
ನಮ್ಮ ಸಮುದಾಯಕ್ಕೆ ಸೇರಿ
ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ
