Udyogatana
ನೌಕರರ ಕಾರ್ನರ್

DOB Change New Rules for Govt Employees- ಸರ್ಕಾರಿ ನೌಕರರ ವಯಸ್ಸು ತಿದ್ದುಪಡಿ ಆಟಕ್ಕೆ ಬ್ರೇಕ್ | ರಾಜ್ಯ ಸರ್ಕಾರದಿಂದ ಹೊಸ ಕಾನೂನು ಜಾರಿ

ಸವಿತಾ ಎಂ.,3 Jan 2026, 08:07 am IST

ಸರ್ಕಾರಿ ನೌಕರರ ವಯಸ್ಸು ಬದಲಾವಣೆಯ ಆಟಕ್ಕೆ ತೆರೆ ಎಳೆಯಲು ರಾಜ್ಯ ಸರ್ಕಾರ ಹೊಸ ಕಾನೂನು ಜಾರಿಗೊಳಿಸಲು ಮುಂದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...

DOB Change New Rules for Govt Employees- ಸರ್ಕಾರಿ ನೌಕರರ ವಯಸ್ಸು ತಿದ್ದುಪಡಿ ಆಟಕ್ಕೆ ಬ್ರೇಕ್ | ರಾಜ್ಯ ಸರ್ಕಾರದಿಂದ ಹೊಸ ಕಾನೂನು ಜಾರಿ

DOB Change New Rules for Govt Employees: ಹೆಚ್ಚು ಸರ್ಕಾರಿ ಕಾಲ ಸೇವೆಯಲ್ಲಿ ಇರಬೇಕು, ಇನ್ನಷ್ಟು ಸಂಬಳ ಪಡೆಯಬೇಕು, ನಿವೃತ್ತಿ ನಂತರ ಹೆಚ್ಚಿನ ಪಿಂಚಣಿ ಸಿಗಬೇಕು ಎಂಬ ಉದ್ದೇಶದಿಂದ ತಮ್ಮ ವಯಸ್ಸು ಅಥವಾ ಡೇಟ್ ಆಫ್ ಬರ್ತ್ ಅನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಸಾಮಾನ್ಯವಾಗಿದೆ.

ಈ ಕಾರಣಕ್ಕೆ ಸರ್ಕಾರಿ ನೌಕರರ ವಯಸ್ಸು ಹಾಗೂ ಜನ್ಮ ದಿನಾಂಕ ಬದಲಾವಣೆ ಎಂಬುದು ಹಲವು ವರ್ಷಗಳಿಂದ ಚರ್ಚೆಗೆ ಕಾರಣವಾಗಿರುವ ವಿಷಯವಾಗಿದೆ. ಇದೀಗ ರಾಜ್ಯ ಸರ್ಕಾರ ಈ ಅಧ್ವಾನಕ್ಕೆ ಕಡಿವಾಣ ಹಾಕಲು ಗಂಭೀರ ನಿರ್ಧಾರ ಕೈಗೊಂಡಿದೆ.

ಸರ್ಕಾರಕ್ಕೆ ತಲೆನೋವು

ಬಹುತೇಕರಿಗೆ ‘ಮೊದಲು ಸರ್ಕಾರಿ ನೌಕರಿ ಸಿಕ್ಕರೆ ಸಾಕು’ ಎಂಬ ಆಸೆ ಇರುತ್ತದೆ. ಆದರೆ ಸೇವೆಗೆ ಸೇರಿದ ಕೆಲವೇ ವರ್ಷಗಳಲ್ಲಿ ಆ ಮನೋಭಾವ ಬದಲಾಗುತ್ತದೆ. ‘ಇನ್ನಷ್ಟು ವರ್ಷ ಸೇವೆಯಲ್ಲಿ ಇರಬೇಕು, ನಿವೃತ್ತಿ ಇನ್ನೂ ದೂರ ಹೋಗಲಿ’ ಎಂಬ ಆಸೆ ಹುಟ್ಟುತ್ತದೆ.

ಅದಕ್ಕಾಗಿಯೇ ಕೆಲವು ನೌಕರರು ವಿವಿಧ ಅಫಿಡೆವಿಟ್‌ಗಳು, ದಾಖಲೆಗಳ ತಿದ್ದುಪಡಿ ಮೂಲಕ ತಮ್ಮ ವಯಸ್ಸು ಅಥವಾ ಜನ್ಮ ದಿನಾಂಕವನ್ನು ಬದಲಾಯಿಸಲು ಯತ್ನಿಸುತ್ತಾರೆ. ಇದು ಕಾನೂನುಬದ್ಧವಾಗಿಯೇ ನಡೆಯುತ್ತಿದ್ದ ಕೆಲ ಪ್ರಕರಣಗಳು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿವೆ.

1974ರ ಹಳೆಯ ಕಾಯಿದೆಗೆ ತೆರೆ

ವಿಶ್ವಸನೀಯ ಮೂಲಗಳ ಮಾಹಿತಿ ಪ್ರಕಾರ, ಕರ್ನಾಟಕ ರಾಜ್ಯ ನೌಕರರ ವಯಸ್ಸನ್ನು ಖಚಿತಪಡಿಸುವ ಕುರಿತು 1974ರಲ್ಲಿ ಜಾರಿಯಲ್ಲಿದ್ದ ಕಾಯಿದೆಯನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಅದರ ಬದಲು ಹೊಸದಾಗಿ ‘ಕರ್ನಾಟಕ ರಾಜ್ಯ ನೌಕರರ ವಯಸ್ಸನ್ನು ಖಚಿತಪಡಿಸುವ ವಿಧೇಯಕ - 2026’ (Karnataka State servants determination of age bill 2026) ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.

ಈ ಹೊಸ ಕಾಯಿದೆ ಜಾರಿಯಾದರೆ, ನೇರ ನೇಮಕಾತಿ ಮೂಲಕ ಸರ್ಕಾರಿ ಸೇವೆಗೆ ಸೇರಿದ ನೌಕರರು ತಮ್ಮ ವಯಸ್ಸು ಅಥವಾ ಜನ್ಮ ದಿನಾಂಕವನ್ನು ಯಾವುದೇ ಕಾರಣಕ್ಕೂ ಬದಲಾಯಿಸಿಕೊಳ್ಳಲು ಸಾಧ್ಯವಿರುವುದಿಲ್ಲ.

ಈ ಬದಲಾವಣೆಗೆ ಕಾರಣವೇನು?

ಇತ್ತೀಚೆಗೆ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಹಲವು ಸಂಘಟನೆಗಳು ಈ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಿವೆ. ಬಹುತೇಕ ನೌಕರರ ಆಗ್ರ ಕೂಡ ಇದೆ ಆಗಿದೆ.

ಈ ಹಿನ್ನೆಯಲ್ಲಿ ಇನ್ನಷ್ಟು ವರ್ಷ ಸರ್ಕಾರಿ ಸೇವೆಯಲ್ಲಿ ಉಳಿಯಬಹುದು, ಹೆಚ್ಚಿದ ಸಂಬಳ ಸಿಗಬಹುದು ಮತ್ತು ನಿವೃತ್ತಿ ವೇತನ (ಪಿಂಚಣಿ) ಕೂಡ ಹೆಚ್ಚಾಗಬಹುದು ಎಂಬ ಲಾಭದ ನಿರೀಕ್ಷೆಯಿಂದ ಕೆಲವು ನೌಕರರು ತಮ್ಮ ವಯಸ್ಸು-ಜನ್ಮ ದಿನಾಂಕ ತಿದ್ದುಪಡಿ ಮಾಡಲು ಮುಂದಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ಇದಕ್ಕೆ ಕಠಿಣ ಕ್ರಮ ಕೈಗೊಳ್ಳುತ್ತಿದೆ.

ಹೊಸ ವಿಧೇಯಕ 2026ರಲ್ಲಿ ಏನಿರಲಿದೆ?

ರಾಜ್ಯ ಸರ್ಕಾರ ತರಲು ಉದ್ದೇಶಿಸಿರುವ ಕರ್ನಾಟಕ ರಾಜ್ಯ ನೌಕರರ ವಯಸ್ಸನ್ನು ಖಚಿತಪಡಿಸುವ ವಿಧೇಯಕ - 2026 ಬಹಳ ಸ್ಪಷ್ಟ ಮತ್ತು ಕಠಿಣ ಅಂಶಗಳನ್ನು ಒಳಗೊಂಡಿದೆ.

ಪ್ರಮುಖವಾಗಿ ಒಮ್ಮೆ ಸರ್ಕಾರಿ ಸೇವೆಗೆ ಸೇರಿದ ನಂತರ ವಯಸ್ಸು ಅಥವಾ ಜನ್ಮ ದಿನಾಂಕ ಬದಲಾವಣೆ ಸಂಪೂರ್ಣ ನಿಷೇಧ. ಸೇವಾ ನೋಂದಣಿ ಪುಸ್ತಕದಲ್ಲಿ ದಾಖಲಾದ ದಿನಾಂಕವೇ ಅಂತಿಮ.

ಯಾವುದೇ ಕಾನೂನು, ಕೋರ್ಟ್ ಅಥವಾ ಪ್ರಾಧಿಕಾರದ ಸೂಚನೆ ಇದ್ದರೂ ಬದಲಾವಣೆ ಸಾಧ್ಯವಿಲ್ಲ. ನೇಮಕಾತಿ ಆದೇಶದ ನಂತರ ಡ್ಯೂಟಿ ರಿಪೋರ್ಟ್ ಮಾಡುವ ಹಂತದಲ್ಲೂ ಜನ್ಮ ದಿನಾಂಕ ತಿದ್ದುಪಡಿ ಅವಕಾಶ ಇಲ್ಲ. ಮೇಲಾಧಿಕಾರಿಗಳು ಹಳೆಯ ದಾಖಲೆಗಳನ್ನೇ ಕಡ್ಡಾಯವಾಗಿ ದಾಖಲಿಸಬೇಕು

ಕೋರ್ಟ್ ಮೆಟ್ಟಿಲು ಏರುವ ಅವಕಾಶವೂ ಇಲ್ಲ!

ಈ ವಿಧೇಯಕದ ಅತಿ ಪ್ರಮುಖ ಅಂಶವೆAದರೆ ನೌಕರರು ತಮ್ಮ ವಯಸ್ಸು ಅಥವಾ ಜನ್ಮ ದಿನಾಂಕ ಬದಲಾವಣೆಗಾಗಿ ಕೋರ್ಟ್ ಅಥವಾ ಯಾವುದೇ ಪ್ರಾಧಿಕಾರಕ್ಕೆ ಹೋಗುವಂತಿಲ್ಲ. ಅಂದರೆ ‘ಸರ್ಕಾರಕ್ಕೆ ಸೂಚಿಸಿ’ ಎಂದು ಕೋರ್ಟ್ಗೆ ಮನವಿ ಸಲ್ಲಿಸಲು ಸಾಧ್ಯವಿಲ್ಲ.

ನ್ಯಾಯಾಲಯದ ಆದೇಶದ ಮೂಲಕವೂ ವಯಸ್ಸು ಬದಲಾವಣೆ ಆಗುವುದಿಲ್ಲ. ಇದು ಸರ್ಕಾರಿ ಸೇವೆಯಲ್ಲಿ ಇನ್ನು ಮುಂದೆ ದಾಖಲೆಗಳ ತಿದ್ದುಪಡಿ ಆಟಗಳಿಗೆ ಸಂಪೂರ್ಣ ಬ್ರೇಕ್ ಹಾಕುವ ನಿರ್ಧಾರವಾಗಿದೆ.

ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ

ಈ ನಿರ್ಧಾರದಿಂದ ಸರ್ಕಾರಿ ಸೇವೆಯಲ್ಲಿ ಪಾರದರ್ಶಕತೆ ಹೆಚ್ಚಲಿದೆ. ನಕಲಿ ದಾಖಲೆಗಳ ಬಳಕೆ ತಡೆಯಲಾಗುತ್ತದೆ. ನಿವೃತ್ತಿಯಲ್ಲಿ ವಿಳಂಬದಿಂದ ಉದ್ಯೋಗ ಅವಕಾಶ ಕಳೆದುಕೊಳ್ಳುತ್ತಿದ್ದ ಯುವಕರಿಗೆ ನ್ಯಾಯ ಸಿಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಮುಂದಿನ ದಿನಗಳಲ್ಲಿ ಈ ವಿಧೇಯಕ ಜಾರಿಗೆ ಬಂದರೆ, ಸರ್ಕಾರಿ ನೌಕರರ ವಯಸ್ಸು-ಜನ್ಮ ದಿನಾಂಕ ಕುರಿತ ಗೊಂದಲಗಳು, ವಿವಾದಗಳು ಮತ್ತು ನ್ಯಾಯಾಲಯದ ಮೊಕದ್ದಮೆಗಳು ಬಹುತೇಕ ಅಂತ್ಯವಾಗುವ ಸಾಧ್ಯತೆ ಇದೆ.

ಸವಿತಾ ಎಂ.,

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#ಸರ್ಕಾರಿ ನೌಕರರ ವಯಸ್ಸು#ಸರ್ಕಾರಿ ನೌಕರರ ಜನ್ಮ ದಿನಾಂಕ ತಿದ್ದುಪಡಿ#ವಯಸ್ಸು ಬದಲಾವಣೆ ಕಾಯಿದೆ#ಕರ್ನಾಟಕ ಸರ್ಕಾರ ಹೊಸ ಕಾನೂನು#ಸರ್ಕಾರಿ ನೌಕರರ ನಿವೃತ್ತಿ ವಯಸ್ಸು#ವಯಸ್ಸು ತಿದ್ದುಪಡಿ ನಿಷೇಧ#ಕರ್ನಾಟಕ ಸರ್ಕಾರಿ ನೌಕರರ ಕಾಯಿದೆ 2026#ಪಿಂಚಣಿ ನಿಯಮ ಬದಲಾವಣೆ#Karnataka Govt Employees#Age and Date of Birth Change#Govt Employees New Law 2026#Karnataka Government Bill 2026#DOB Change Rules for Govt Employees#Retirement Age of Govt Employees#Karnataka State Employees Act#Pension Rules Karnataka
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...