Udyogatana
ನೌಕರರ ಕಾರ್ನರ್

8ನೇ ವೇತನ ಆಯೋಗ ರಚನೆ | ಸರ್ಕಾರಿ ನೌಕರರಿಗೆ ಭರ್ಜರಿ ಹೆಚ್ಚಲಿದೆ ಸಂಬಳ ಸವಲತ್ತುಗಳು

ಸವಿತಾ ಎಂ.,31 Oct 2025, 01:43 pm IST

ಕೇಂದ್ರ ಸರ್ಕಾರ ಕಡೆಗೂ 8ನೇ ವೇತನ ಆಯೋಗ ರಚನೆ ಮಾಡಿದ್ದು; ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಇದರಿಂದ ಹಾಲಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಭಾರಿ ಅನುಕೂಲವಾಗಲಿದೆ...

8ನೇ ವೇತನ ಆಯೋಗ ರಚನೆ | ಸರ್ಕಾರಿ ನೌಕರರಿಗೆ ಭರ್ಜರಿ ಹೆಚ್ಚಲಿದೆ ಸಂಬಳ ಸವಲತ್ತುಗಳು

8th Pay Commission: ಕಡೆಗೂ ಕೇಂದ್ರ ಸಚಿವ ಸಂಪುಟವು 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದಕ್ಕಾಗಿ ಸಿದ್ಧಪಡಿಸಲಾದ ರೂಪುರೇಷೆ ಹಾಗೂ ನಿಯಮಗಳಿಗೆ ಕೇಂದ್ರ ಸಂಪುಟ ಸಭೆಯು ಅನುಮೋದನೆ ನೀಡಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ (Cabinet meeting) ಸಭೆಯಲ್ಲಿ 8ನೇ ವೇತನ ಆಯೋಗದ ನಿಯಮಗಳಿಗೆ ಒಪ್ಪಿಗೆ ನೀಡಿದೆ. ಇದರಿಂದ ಕೇಂದ್ರ ಸರ್ಕಾರದ ಸುಮಾರು 50 ಲಕ್ಷ ನೌಕರರು ಮತ್ತು 69 ಲಕ್ಷ ಪಿಂಚಣಿದಾರರಿಗೆ ಪ್ರಯೋಜನ ಭಾರೀ ದೊರೆಯಲಿದೆ.

ಕೇಂದ್ರ ಸಂಪುಟ ಸಭೆಯಿಂದ ಅನುಮೋದನೆ

ಈ ವರ್ಷದ ಜನವರಿಯಲ್ಲಿ 8ನೇ ವೇತನ ಆಯೋಗವನ್ನು (8th Pay Commission) ರಚಿಸಲು ಸಚಿವ ಸಂಪುಟ ಅನುಮೋದನೆ ನೀಡಿತ್ತು. ಜುಲೈನಲ್ಲಿ ಮುಂಗಾರು ಅಧಿವೇಶನದ ವೇಳೆ ಆಯೋಗ ರಕ್ಷಣೆ, ಗೃಹ ಇಲಾಖೆಗಳು, ಸಿಬ್ಬಂದಿ ಮತ್ತು ತರಬೇತಿ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳಿಂದ ಮಾಹಿತಿ ಸಂಗ್ರಹಿಸಿ ನಿಯಮಗಳನ್ನು ಅಂತಿಮಗೊಳಿಸಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ಆಯೋಗ ರಚನೆಯಾದ 9 ತಿಂಗಳ ಬಳಿಕ ನಿಯಮಗಳಿಗೆ ಅನುಮೋದನೆ ದೊರೆತಿದೆ.

ವೇತನ ಆಯೋಗ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ಲಭ್ಯವಿರುವ ಸೌಲಭ್ಯಗಳು, ಕೆಲಸದ ಸ್ಥಳದ ಪರಿಸ್ಥಿತಿಯನ್ನು ಅಧ್ಯಯನ ನಡೆಸಲಿದ್ದು, ದೇಶದ ಆರ್ಥಿಕ ಪರಿಸ್ಥಿತಿ, ಹಣಕಾಸಿನ ಸ್ಥಿತಿ ಆಧರಿಸಿ ತನ್ನ ಶಿಫಾರಸುಗಳನ್ನು ಮಾಡಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

2026ರಿಂದ ಅನ್ವಯ

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ವೇತನ ಆಯೋಗವು 12ರಿಂದ 18 ತಿಂಗಳಲ್ಲಿ ಶಿಫಾರಸುಗಳನ್ನು ಸಲ್ಲಿಸುವ ನಿರೀಕ್ಷೆಯಿದೆ. ಆದರೆ, ಈ ಶಿಫಾರಸುಗಳು 2026ರ ಜನವರಿ 1 ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರುವ ಸಾಧ್ಯತೆ ಇದೆ.

ಈ ಹಿಂದೆ ಫೆಬ್ರವರಿ 2014ರಲ್ಲಿ 7ನೇ ವೇತನ ಆಯೋಗವನ್ನು ರಚಿಸಲಾಗಿತ್ತು, ಕೇಂದ್ರ ಸರ್ಕಾರ ಆಯೋಗದ ಶಿಫಾರಸುಗಳನ್ನು 2016ರ ಜನವರಿ 1ರಿಂದ ಅನ್ವಯವಾಗುವಂತೆ ಜಾರಿಗೆ ತಂದಿತ್ತು. ಸಾಮಾನ್ಯವಾಗಿ 10 ವರ್ಷಗಳ ಬಳಿಕ ಹೊಸ ವೇತನ ಆಯೋಗದ ಶಿಫಾರಸು ಅನ್ವಯವಾಗುತ್ತವೆ.

ಸವಿತಾ ಎಂ.,

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#ಎಂಟನೇವೇತನಆಯೋಗ#ಸರ್ಕಾರಿನೌಕರರು#ಪಿಂಚಣಿದಾರರು#ಸಂಬಳಹೆಚ್ಚಳ#ಕೇಂದ್ರಸರ್ಕಾರ#ವೇತನಸವಲತ್ತು#8thPayCommission#CentralGovtEmployees#SalaryHike#PayRevision#GovernmentNews#Pensioners#ModiCabinet#IndiaNews
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...